Thursday, July 28, 2011

ಅನಿವಾರ್ಯತೆಯ ಭ್ರಮೆ ತೊರೆದರೆ ವ್ಯಕ್ತಿತ್ವ ವಿಕಸನಕ್ಕೆ ದಾರಿ.

ಕಬೀರರು ಒಂದು ಬಾರಿ ಕಾಶಿಗೆ ಹೋದಾಗ ಸತ್ಸಂಗದಲ್ಲಿ ಭಾಗಿಯಾಗಲು ಸಣ್ಣ ಬೀದಿಯಲ್ಲಿ ನಡೆದು ಹೋಗುತ್ತಿದ್ದರು. ಮೂರು ನಾಲ್ಕು ದಿನಗಳವರೆಗೆ ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಒಂದು ವಿಶೇಷ ಅವರ ಕಣ್ಣಿಗೆ ಬಿತ್ತು. ಒಂದು ಮನೆಯ ಆವರಣದೊಳಗೆ ಒಬ್ಬ ಮನುಷ್ಯ ಮನೆಯ ಮುಂದೆ ಕುರ್ಚಿ ಹಾಕಿಕೊಂಡು ಕುಳಿತಿದ್ದಾನೆ. ಹಾಗೆಯೇ ವಿಗ್ರಹದಂತೆ ಏನೂ ಮಾಡದೇ ಕುಳಿತಿದ್ದಾನೆ. ಕಬೀರರು ಅವನ ಬಳಿಗೆ ಹೋಗಿ, `ಸ್ವಾಮೀ, ನಾನು ನಾಲ್ಕು ದಿನದಿಂದ ನೋಡುತ್ತಿದ್ದೇನೆ. ನೀವು ಹೀಗೆಯೇ ಕುಳಿತಿದ್ದೀರಿ. ಇದರ ಬದಲು ನಮ್ಮಂದಿಗೆ ತತ್ಸಂಗಕ್ಕೆ ಬಂದು ಸೇರಬಹುದಲ್ಲ?~ ಎಂದು ಕೇಳಿದರು. ಅದಕ್ಕೆ ಅವನು, `ಸಮಯ ಯಾರಿಗೆ ಇದೆ ಸ್ವಾಮೀ ಸತ್ಸಂಗಕ್ಕೆ ಬಂದು ಕೂಡ್ರಲು? ನನಗೂ ಸತ್ಸಂಗಕ್ಕೆ ಬರುವ ಆಸೆ ಇದೆ. ಆದರೆ ಮನೆ ಜವಾಬ್ದಾರಿ ಯಾರು ಹೊರುವವರು? ನನ್ನ ಹೆಂಡತಿ ಕಾಲವಾಗಿದ್ದಾಳೆ, ಪುಟ್ಟ ಪುಟ್ಟ ಮಕ್ಕಳ ಭಾರವೆಲ್ಲ ನನ್ನ ಮೇಲೆಯೇ. ಅವರಿಗೆ ಸ್ನಾನ ಮಾಡಿಸಿ ಶಾಲೆಗೆ ಕಳಿಸಿ, ಮರಳಿ ಬರುವುದರಲ್ಲಿ ಊಟದ ವ್ಯವಸ್ಥೆ ಮಾಡಬೇಕು. ಸ್ವಲ್ಪ ದಿನ ಹೋಗಲಿ, ಮಕ್ಕಳು ದೊಡ್ಡವರಾಗಲಿ ಆಗ ನಿಮ್ಮಂದಿಗೆ ನಾನೂ ಸಂತೋಷದಿಂದ ಬರುತ್ತೇನೆ~ ಎಂದ.
ಸಮಯ ಸರಿಯಿತು. ಮತ್ತಷ್ಟು ವರ್ಷಗಳ ನಂತರ ಕಬೀರರು ಕಾಶಿಗೆ ಹೋದಾಗ ಅದೇ ಬೀದಿಯಲ್ಲಿ ಹೋಗಬೇಕಾಯಿತು. ಅವರಿಗೆ ಆಶ್ಚರ್ಯ. ಅದೇ ಮನುಷ್ಯ ಈಗ ಸ್ವಲ್ಪ ಹಿರಿಯರ ಹಾಗೆ ಕಾಣುತ್ತಾನೆ, ಆದರೆ ಹಾಗೆಯೇ ಮನೆಯ ಮುಂದೆ ಕುಳಿತಿದ್ದಾನೆ. ಕಬೀರರು ಹೋಗಿ ಈಗಲಾದರೂ ತಮ್ಮ ಜೊತೆಗೆ ಸತ್ಸಂಗಕ್ಕೆ ಬರಬಹುದೇ ಎಂದು ಕೇಳಿದರು. ಅವನು ನಿಟ್ಟಿಸಿರು ಬಿಟ್ಟು, `ನೀವು ಪುಣ್ಯಾತ್ಮರು, ನಿಮ್ಮ ಹತ್ತಿರ ಅಷ್ಟೊಂದು ಸಮಯವಿದೆ. ನನಗೆಲ್ಲಿ ಪುರಸೊತ್ತು ಸ್ವಾಮೀ? ನನ್ನ ಮಕ್ಕಳಿಬ್ಬರ ಕಲಿಕೆ ಮುಗಿಯುತ್ತ ಬಂದಿದೆ. ಅವರ ಜವಾಬ್ದಾರಿ ನನ್ನದೇ. ಅವರು ನಂತರ ಕೆಲಸ ಹುಡುಕಬೇಕು. ಅವರಿಗೆ ಮದುವೆ ಮಾಡಬೇಕು. ಅವರ ಮದುವೆಯಾದ ಮೇಲೆ ನಾನು ಸ್ವತಂತ್ರನಾಗುತ್ತೇನೆ. ಆಗ ನಿಮ್ಮಂದಿಗೆ ಸತ್ಸಂಗಕ್ಕೆ ಬರುತ್ತೇನೆ .
ಮತ್ತಷ್ಟು ಕಾಲ ಕಳೆಯಿತು. ಮತ್ತೆ ಕಾಶಿಯಲ್ಲಿ ಅದೇ ರಸ್ತೆಯಲ್ಲಿ ಹೋಗುವ ಅವಕಾಶ ಬಂತು. ಕುತೂಹಲದಿಂದ ನೋಡಿದರೆ ಆ ಮನುಷ್ಯ ಮತ್ತೆ ಹಾಗೆಯೇ ಕುಳಿತಿದ್ದಾನೆ. ವಯಸ್ಸಾದಂತೆ ತೋರುತ್ತಾನೆ. ಶರೀರ ಕುಗ್ಗಿದೆ. ಕಬೀರರು ಹೋಗಿ ಮತ್ತೆ ಸತ್ಸಂಗಕ್ಕೆ ಬರಲು ವಿನಂತಿ ಮಾಡಿಕೊಂಡರು. ಆತ ಇವರ ಕೈ ಹಿಡಿದು ಹೇಳಿದ, `ಮಹಾತ್ಮರೇ ತಾವು ನನ್ನ ಮೇಲಿಟ್ಟ ಕರುಣೆಗೆ ನಾನು ಋಣಿಯಾಗಿದ್ದೇನೆ.
ನನಗಿನ್ನೂ ಮುಕ್ತಿಯಾಗಿಲ್ಲ. ನನ್ನ ಮಕ್ಕಳು ಇಬ್ಬರಿಗೂ ಮದುವೆಯಾಗಿದೆ. ಆದರೆ ಇಬ್ಬರು ಸೊಸೆಯಂದಿರೂ ಕೆಲಸ ಮಾಡುವವರೇ. ಬೆಳಿಗ್ಗೆ ಎದ್ದ ತಕ್ಷಣ ನಾಲ್ಕೂ ಜನ ತಯಾರಿಯಾಗಿ ಕೆಲಸಕ್ಕೆ ಹೊರಡುತ್ತಾರೆ. ಅವರಿಗೆ ನಾನು ವ್ಯವಸ್ಥೆ ಮಾಡಬೇಡವೇ? ಅವರು ಹೋದ ಮೇಲೆ ಅವರ ಮಕ್ಕಳ ಜವಾಬ್ದಾರಿ ನನ್ನದೇ ತಾನೇ? ಇಬ್ಬರಿಗೂ ಎರಡೆರಡು ಮಕ್ಕಳಿದ್ದಾರೆ. ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವೇ? ಒಂದು ಸಲ ಈ ಮಕ್ಕಳು ಶಾಲೆಗೆ ಹೋಗತೊಡಗಿದರೆ ನಾನು ನಿಶ್ಚಿಂತನಾಗುತ್ತೇನೆ. ಆಗ ನನಗೆನು ಕೆಲಸ? ನಾನು ನಿಮ್ಮ ಜೊತೆಗೆ ಸತ್ಸಂಗಕ್ಕೆ ಬಂದು ಬಿಡುತ್ತೇನೆ.~ ಮತ್ತೊಂದು ಕೆಲವು ವರ್ಷಗಳು ಸರಿದವು. ಕಬೀರರು ಕಾಶಿಗೆ ಹೋದಾಗ ಮತ್ತದೇ ಮನೆಯ ಮುಂದೆ ಹೋಗುವ ಪ್ರಸಂಗ ಬಂದಿತು. ಈಗ ಆ ಮನುಷ್ಯ ಕುಳಿತಿದ್ದು ಕಾಣಲಿಲ್ಲ. ಅವನ ಬದಲಾಗಿ ಕುರ್ಚಿಯ ಪಕ್ಕದಲ್ಲಿ ಒಂದು ನಾಯಿ ಮಲಗಿಕೊಂಡಿತ್ತು. ಪಿಳಿಪಿಳಿ ಕಣ್ಣು ಬಿಡುತ್ತ ಮನೆಯನ್ನೂ, ಆವರಣದ ಬಾಗಿಲನ್ನೂ ನೋಡುತ್ತಿತ್ತು. ಒಳಗೆ ಹೋಗಿ ವಿಚಾರಿಸಿದರೆ ಯಜಮಾನರು ಕಾಲವಾಗಿ ಎರಡು ವರ್ಷವಾಯಿತೆಂದು ಹೇಳಿದರು. ಆಗ ಕಬೀರರು ತಮ್ಮ ಶಿಷ್ಯರಿಗೆ ಹೇಳಿದರು, `ಪಾಪ! ಈ ಮನುಷ್ಯನ ಹಣೆಬರಹ ನೋಡಿರಿ. ಅವನಿಗೆ ಮನೆಯ ಬಗ್ಗೆ ಎಷ್ಟು ಮೋಹವೆಂದರೆ ದೇಹ ಬಿಟ್ಟರೂ ನಾಯಿಯಾಗಿ ಬಂದು ಮನೆ ಕಾಯುತ್ತಿದ್ದಾನೆ. ಅವನಿಲ್ಲದೇ ಮನೆ ನಡೆದಿಲ್ಲವೇ? ಮಕ್ಕಳೂ, ಮೊಮ್ಮಕ್ಕಳೂ ಚೆನ್ನಾಗಿಯೇ ಇದ್ದಾರೆ. ಆದರೆ ಆತ ತಾನು ಇಲ್ಲದೇ ಸಂಸಾರವೇ ನಡೆಯುವುದಿಲ್ಲವೆಂದುಕೊಂಡು ತನ್ನ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳದೇ, ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳದೇ ಹೋಗಿಬಿಟ್ಟ.~
ನಮಗೂ ಅದೇ ಭ್ರಮೆಗಳಿವೆ. ನಾನಿಲ್ಲದೇ ಮನೆ ಹೇಗೆ ನಡೆದೀತು? ಸಂಸ್ಥೆ ಹೇಗೆ ನಡೆದೀತು? ಮಕ್ಕಳು ಏನು ಮಾಡಿಯಾರು? ಯಾರು ಅವರನ್ನೆಲ್ಲ ನೋಡಿಕೊಳ್ಳುವವರು? ಈ ಚಿಂತೆಗಳಲ್ಲಿ ತೊಳಲಿಬಿಡುತ್ತೇವೆ. ನಾನು ಹುಟ್ಟುವ ಮೊದಲೂ ಪ್ರಪಂಚವಿತ್ತು, ಚೆನ್ನಾಗಿಯೇ ಇತ್ತು. ನಾನು ಹೋದ ಮೇಲೂ ಪ್ರಪಂಚವಿರುತ್ತದೆ, ಚೆನ್ನಾಗಿಯೇ ಇರುತ್ತದೆ ಎಂಬ ಚಿತ್ರ ಮನದಲ್ಲಿ ಮೂಡಿದಾಗ ನನ್ನ ಅನಿವಾರ್ಯತೆಯ ಭ್ರಮೆ ಕರಗುತ್ತದೆ. ಪ್ರಪಂಚಕ್ಕೆ ಬಂದ ಮೇಲೆ ನನ್ನ ಶಕ್ತಿಯನ್ನೆಲ್ಲ ವೃದ್ಧಿಸಿಕೊಂಡು ನನ್ನದೇ ಆದ ಕೊಡುಗೆಯೊಂದನ್ನು ಪ್ರಪಂಚಕ್ಕೆ ಕೊಟ್ಟು ಹೋಗಬೇಕೆಂಬ ಆಸೆ ಮೂಡುತ್ತದೆ. ಅದೇ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ.

0 comments:

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Facebook Themes